ಓದುಗರೇ, ನಿಮಗಿದೋ ನನ್ನ ಸ್ವಾಗತ

ಇಷ್ಟು ವರ್ಷ ನಾನು ಬರೆದ ಲೇಖನ, ಕವನ ಹಾಗು ಗದ್ಯಗಳನ್ನು ಈ ನನ್ನ  ವೆಬ್ ಸೈಟ್ ಮುಖಾಂತರ ಓದುಗರಿಗೆ ತಲುಪಿಸುವ ನನ್ನ ಒಂದು ಸಣ್ಣ ಪ್ರಯತ್ನ. ನಿಮಗೆ ಇಷ್ಟವಾದರೆ ಪ್ರತಿ ಪುಟದ ಕೆಳಗೆ ಇರುವ Comment Section ಅಲ್ಲಿ ಪ್ರತಿಕ್ರಯಿಸಿ.

Posted in Uncategorized | 2 Comments

ಬದುಕು ಬದಲಿಸಿದ ಜಂಗಮ ಗಂಟೆ!

ಅಭಿವೃಧ್ಧಿ ಪಥದ ಮೇಲೆ ಮನುಷ್ಯನ ನಡಿಗೆಯಲ್ಲಿ ಬರವಣಿಗೆಯೊಂದು ದಾಪುಗಾಲು. ಹಲವು ಶತಮಾನಗಳ ಕನಸನ್ನು ಸಾಕಾರಗೊಳಿಸಿದ ಹೆಜ್ಜೆ. ಬರವಣಿಗೆ ರೂಢಿಯಾದ ಮೇಲೆ ಮುದ್ರಣವು ಇನ್ನೊಂದು ಮಹತ್ತರ ತಿರುವು. ಹಾಗೆಯೇ ನಮ್ಮ ಅಭಿವೃದ್ಧಿಯ ದಾರಿಯಲ್ಲಿ ಮನುಷ್ಯನ ಧ್ವನಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿಸ್ತರಿಸುವುದು ದೊಡ್ಡ ಸವಾಲಾಗಿತ್ತು. ಒಬ್ಬನ ಧ್ವನಿ ಎಷ್ಟು ದೂರ ಕೇಳಬಹುದು? ನಾವು ಆಧುನಿಕರು ದೊಡ್ಡದಾಗಿ ಮಾತನಾಡುವುದನ್ನೂ ಅನಾಗರಿಕತೆ ಎಂದು ಯೋಚಿಸುವವರು ದೊಡ್ಡದಾಗಿ, ದೂರಕ್ಕೆ ಕೇಳುವಂತೆ ಕೂಗಲಾರೆವು. ಅದೇ ಹಳ್ಳಿ ಹೈದರು ಕಿಲೋಮೀಟರು ಗಟ್ಟಲೆ ದೂರ ಕೇಳುವಂತೆ ಕೂ ಹಾಕಬಹುದು. ಕೂಗಳತೆಯ ದೂರ ಎಂಬುದು ನಮ್ಮಲ್ಲಿ ದೂರದ ಅಳತೆಗೊಲಾಗಿತ್ತು. ಹಿಂದೆಲ್ಲ ಕಾಡಿಗೆ ಹೋದವರು ದಾರಿತಪ್ಪಿದರೆ ಕುಹೂ ಎಂದು ಬಹಳ ದೂರ ಕೇಳುವಂತೆ ಕೂಗುವ ಮೂಲಕ ಸಂಪರ್ಕ ಸಾಧಿಸುತ್ತಿದ್ದರು. ಈಗ ಹಾಗೆ ಕೂಗುವುದೂ ಕೂಡ ಚರಿತ್ರೆಗೆ ಸೇರಿಬಿಟ್ಟಿದೆ.

ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದುಕಡೆಯಿಂದ ಇನ್ನೊಂದು ಕಡೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಗ್ರಹಾಂ ಬೆಲ್ ದೂರವಾಣಿಯ ಸಂಶೋಧನೆ ಮಾಡಿದ್ದು ಅಂಥ ಬಹುದಿನಗಳ ಬೇಡಿಕೆಯನ್ನು ಪೂರೈಸಿತು. ಆಗ ಇದ್ದುದು ವೈರುಗಳ ಮೂಲಕ ಸಂಪರ್ಕ ಸಾಧಿಸುವ ದೂರವಾಣಿ. ಇಲ್ಲಿಂದ ಇಂಗ್ಲೆಂಡಿಗೆ ಫೋನು ಮಾಡುವುದಿದ್ದರೂ ನಿಮ್ಮ ಧ್ವನಿ ತಂತಿಯ ಮೂಲಕವೇ ಸಾಗಬೇಕಿತ್ತು. ಅದೇ ಒಂದು ಮಹತ್ತರ ಕ್ರಾಂತಿಯಾಗಿತ್ತು. ಮಹಾಸಾಗರಗಳ ಅಡಿಯಲ್ಲಿ ಕೇಬಲ್ಲುಗಳನ್ನು ಎಳೆದು ಖಂಡಾಂತರ ಸಂಪರ್ಕ ಸಾಧಿಸುವ ವ್ಯವಸ್ಥೆ ಜಾರಿಗೆ ಬಂದಿದ್ದು ಮನುಕುಲದ ದೊಡ್ಡ ಸಾಧನೆ. ಅಲ್ಲಿಯವರೆಗೂ ಖಂಡಾಂತರ ಸಂಪರ್ಕಕ್ಕೆ ಇದ್ದ ಏಕೈಕ ಸಾಧನ ಪತ್ರಗಳು. ಪತ್ರಬರೆದರೆ ಸಮುದ್ರ ಮೂಲಕ ಹೋಗಲು ತಿಂಗಳುಗಟ್ಟಲೆ ಬೇಕಾಗುತ್ತಿತ್ತು. ಕೇಬಲ್ಲುಗಳನ್ನು ಎಳೆದಾಗ ಈ ಸಮಸ್ಯೆ ಬಗೆಹರಿಯಿತು. ಟೆಲಿಫೋನು ಬಹುದೊಡ್ಡ ಸಂಪರ್ಕ ಕ್ರಾಂತಿಯಾಗಿ ಕಾಣಿಸಿಕೊಂಡಿತು.

ಮಲೆನಾಡಿನ ಹಳ್ಳಿಗಳಲ್ಲಿ ಕಾಡು ಮೇಡುಗಳನ್ನು ಬೇಧಿಸಿಕೊಂಡು ಟೆಲಿಪೋನು ತಂತಿಗಳನ್ನು ಎಳೆದು, ಮನೆಮನೆಗಳಲ್ಲಿ ಫೋನೆಂಬ ಪೆಟ್ಟಿಗೆ ಬಂದು ಕುಳಿತಾಗ ಜನಕ್ಕೆ ಆಗುತ್ತಿದ್ದ ರೋಮಾಂಚನವನ್ನು ನಾನು ಚಿಕ್ಕಂದಿನಲ್ಲಿ ವಾನಳ್ಳಿಗೆ ಫೋನುಬಂದಾಗ ಕಂಡಿದ್ದೇನೆ. ಟೆಲಿಫೋನು ಗುಣಗುಣಿಸಿದರೆ ಮುದುಕರು ಹೆದರಿಬೀಳುತ್ತಿದ್ದರು. ಮಕ್ಕಳು ಕುಂಯ್ ಗುಡುತ್ತಿದ್ದರು. ಆರಂಭದಲ್ಲಿ ಮಲೆನಾಡಿನ ಮನೆಗಳಲ್ಲಿ ಫೋನೆಂಬುದು ಅಲಂಕಾರದ ಪೆಟ್ಟಿಗೆಯಾಗುವುದೇ ಹೆಚ್ಚಿತ್ತು. ಒಂದಲ್ಲ ಒಂದು ಕಡೆ ಮರಬಿದ್ದು ತಂತಿಹರಿದು ಫೋನು ಸತ್ತಂತಾಗುತ್ತಿತ್ತು. ಮಳೆಗಾಲದಲ್ಲಂತೂ ನಾಲ್ಕುತಿಂಗಳು ದೂರವಾಣಿಯನ್ನು ಮರೆತುಬಿಡಬೇಕಾಗುತ್ತಿತ್ತು.

ಇದೆಲ್ಲ ಯಾಕೆ ನೆನಪಿಗೆ ಬಂತೆಂದರೆ…….ಮೊನ್ನೆ ಜುಲೈ 30ರಂದು ಪತ್ರಿಕೆ ಓದುತ್ತಿದ್ದಾಗ ಮೊಬೈಲು ಭಾರತಕ್ಕೆ ಬಂದು ಹದಿನೈದು ವರ್ಷವಾಯಿತು ಎಂಬ ಸುದ್ದಿ ಓದಿದೆ. ಜುಲೈ30,1995ರಂದು ಸಂಪರ್ಕ ಸಚಿವ ಸುಖರಾಮ್ ಆಗಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಜ್ಯೋತಿ ಬಸು ಅವರಿಗೆ ಫೋನಾಯಿಸುವ ಮೂಲಕ ಭಾರತದಲ್ಲಿ ಮೊಬೈಲು ಕ್ರಾಂತಿಗೆ ನಾಂದಿ ಹಾಡಿದ್ದರಂತೆ. ಒಂದು ಬಿಲಿಯನ್ ಜನರ ದೇಶದಲ್ಲಿ ಹದಿನೈದು ವರ್ಷದಲ್ಲಿ ಮೊಬೈಲು ಈ ಪರಿಕ್ರಾಂತಿ ಮಾಡಬಹುದೆಂದು ಯಾರು ನಿರೀಕ್ಷಿಸಿದ್ದರು? ಈಗ ಭಾರತದ ಜನಸಂಖ್ಯೆಯ ಶೇಕಡಾ63.5 ಜನ ಮೊಬೈಲು ಬಳಸುವವರು! ಜುಲೈ 30ರ ಹೊತ್ತಿಗೆ ಭಾರತದಲ್ಲಿದ್ದ ಮೊಬೈಲು ಗ್ರಾಹಕರ ಸಂಖ್ಯೆ 635.51 ಮಿಲಿಯ, ಪ್ರತಿತಿಂಗಳು ಹತ್ತು ಮಿಲಿಯನ್ ಜನ ಮೊಬೈಲು ಮಾಲಿಕರಾಗುತ್ತಿದ್ದಾರೆ ಎಂಬುದು ಈಚಿನ ವರದಿ. ಜಗತ್ತಿನ ಬಹುಪಾಲು ದೇಶಗಳ ಜನಸಂಖ್ಯೆಯೇ ಹತ್ತು ಮಿಲಿಯವಿಲ್ಲ ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ!

ಈಗ ಮೊಬೈಲು ಎಂಬುದು ‘ಎಲ್ಲಿಬೇಕಾದರೂ ಹಾಗೂ ಯಾವಾಗಬೇಕಾದರೂ’ ಎನಿಸಿಕೊಳ್ಳುವ ಸಾಧನ. ಕನ್ನಡದಲ್ಲಿ ಇದನ್ನು ಬೇರೆ ಬೇರೆ ಹೆಸರಿಂದ ಕರೆಯುವ ಪ್ರಯತ್ನಗಳು ನಡೆದರೂ ಈಗ ಮೊಬೈಲು ಎಂಬುದು ಸರ್ವಮಾನ್ಯತೆ ಪಡೆದಂತಿದೆ.ಜಂಗಮಗಂಟೆ ಎಂದು ಯಾರು ಬಳಸಿದ್ದೋ ಗೊತ್ತಿಲ್ಲ. ಆದರೆ ಈ ಹೆಸರು ಮಾಮಿಕವಾಗಿದೆ. ಹಿಂದೆ ಮೊಬೈಲಿನ ಬೆಲೆ ಜನಸಾಮಾನ್ಯರ ಕೈಗೆ ಎಟುಕುವಂತಿರಲಿಲ್ಲ. ಗಾತ್ರ ಎಲ್ಲರ ಕೈಯಲ್ಲಿ ಹಿಡಿಯುವಂತಿರಲಿಲ್ಲ. ಜೇಬೊಳಗೆ ಇಳಿಬಿಟ್ಟರೆ ಜೇಬು ಹರಿಯುವಷ್ಟು ಭಾರವಿರುತ್ತಿತ್ತು. ಕಿವಿಗೆ ಮೊಬೈಲು ಹಚ್ಚಿಕೊಂಡು ಕತ್ತುವಾರೆ ಮಾಡಿಕೊಂಡು ರಸ್ತೆಯಮೇಲೆ ನಡೆಯುವುದೊಂದು ಘನತೆಯ ವಿಷಯವಾಗಿತ್ತು. ಈಗ ಹಾಗಲ್ಲ. ಮಕ್ಕಳಿಂದ ಮುದುಕರವರೆಗೆ, ‘ಎಲ್ಲರಿಗೂ ಎಲ್ಲಕಾಲದಲ್ಲು’ ಬೇಕಾಗುವ ಸಾಧನ ಎಂಬಂತಾಗಿದೆ. ಅದರ ಗಾತ್ರ ಚಿಕ್ಕದಾಗಿದೆ. ಆಕಾರ ಆಕರ್ಷಕವಾಗಿದೆ. ಜೊತೆಗೆ ಅದು ಕೇವಲ ಫೋನಲ್ಲ. ಫೋಟೋ ತೆಗೆಯುವ ಕೆಮರಾ, ಸುದ್ದಿ ಕೇಳಬಹುದಾದ ರೇಡಿಯೋ, ಹಾಡು ಕೇಳುವ ಟೇಪ್ ರೆಕಾರ್ಡರು, ಧ್ವನಿಮುದ್ರಕ, ಸಮಯ ಕಳೆಯುವ ಆಟಗೆ, ಲೆಕ್ಕಮಾಡುವ ಗಣಕ ಯಂತ್ರ, ಮುಂತಾಗಿ ಮುಂತಾಗಿ ಅದರ ಸಾಧ್ಯತೆಗಳಿಗೂ ಉಪಯುಕ್ತತೆಗಳಿಗೂ ಲೆಕ್ಕವಿಲ್ಲ ಎಂಬಂತಾಗಿದೆ. ಒಂದು ಕಾಲದಲ್ಲಿ ಮೊಬೈಲು ಹಿಡಿದು ಓಡಾಡುವುದು ಪ್ರತಿಷ್ಠೆವಿಷಯವಾಗಿದ್ದರೆ ಇಂದು ಬಡತನವನ್ನು ನಿರ್ಧರಿಸಲು ಇದೂ ಒಂದು ಅಳತೆಗೋಲು ಎಂಬಂತಾಗಿದೆ. ‘ಅವರ ಬಳಿ ಒಂದು ಮೊಬೈಲೂ ಇಲ್ಲ’ ಎಂದರೆ- ಪಾಪ ಬಡವರು ಎಂಬ ಅರ್ಥ. ಮೊಬೈಲು ಹೊಂದದಿದ್ದರೆ ‘ಈ ಕಾಲದವರಲ’್ಲ ಎಂದು ತಮಾಷೆಮಾಡುತ್ತಾರೆ. ಈಗಿನ ಮೊಬೈಲುಗಳ ಸಂಕೀರ್ಣ ಕೆಲಸಕಾರ್ಯಗಳನ್ನು ಕಂಡರೆ ಕಂಪ್ಯೂಟರ್ ಸಾಕ್ಷರತೆ ಇರುವ ಹಾಗೆ ‘ಮೊಬೈಲು ಸಾಕ್ಷರತೆ’ ಎನ್ನಬಹುದೇನೋ. ಯಾರು ಮೊಬೈಲು ಬಳಸಲು ನಿಷ್ಣಾತರಲ್ಲವೋ, ಅವರದು ಮೊಬೈಲು ಅನಕ್ಷರತೆ!

ಮೊಬೈಲು ಎಷ್ಟರ ಮಟ್ಟಿಗೆ ನಮ್ಮ ಜೀವನದ ಭಾಗವಾಗಿದೆಯೆಂದರೆ ಸ್ವಲ್ಪ ಹೊತ್ತು ಮೊಬೈಲು ಇಲ್ಲದಿದ್ದರೆ ನೀರಿಂದ ಹೊರಬಂದ ಮೀನಂತೆ ಜನ ಆಡುತ್ತಾರೆ. ತರಗತಿಗೆ ಬರುವಾಗ ಮೊಬೈಲು ಸ್ವಿಚ್ಚು ಆರಿಸಿಬನ್ನಿ ಎಂದು ನಾನು ಒಮಾನಿ ಹುಡುಗರಿಗೆ ಹೇಳಿದರೆ ಅವರಿಗೆ ಅದು ಇಷ್ಟವಾಗುತ್ತಿರಲಿಲ್ಲ. ಗಂಭೀರವಾಗಿ ಪಾಠಮಾಡುವಾಗ ಮೊಬೈಲು ರಿಂಗಣಿಸುವ ಸಮಸ್ಯೆ ನಮ್ಮದೇಶದಲ್ಲೂ ಇದೆ. ಪ್ರಾಥಮಿಕ ಶಾಲೆಗಳ ಮಕ್ಕಳೂ ಮೊಬೈಲು ತರಲಾರಂಭಿಸಿ ಅದರಿಂದಾಗುವ ಉಪಟಳವನ್ನು ತಪ್ಪಿಸುವುದು ಶಾಲೆಗಳವರಿಗೆ ಸವಾಲಾಗಿದೆ. ಈಗ ಸಾರ್ವಜನಿಕ ಸಮಾರಂಭಗಳಲ್ಲಿ ಸಂಘಟಕರು ಮೊಬೈಲು ಆರಿಸುವಂತೆ ಮನವಿಮಾಡುವುದು, ಆದರೂ ಕೆಲವರ ಮೊಬೈಲು ನಡುನಡುವೆ ಕಿರುಗುಟ್ಟಿ ಕೋಪ ಬರಿಸುವುದು ಮಾಮೂಲು. ವಿಮಾನಗಳಲ್ಲಿ ಮೊಬೈಲು ಸ್ವಿಚ್ಚು ಆರಿಸುವಂತೆ ಗಗನಸಖಿ ವಿನಂತಿಸುತ್ತಾಳೆ. ಇದರ ತರಂಗಗಳು ವಿಮಾನ ಸಂಪರ್ಕಕ್ಕೆ ತೊಂದರೆ ಕೊಡಬಹುದು ಎಂಬ ಎಚ್ಚರಿಕೆ. ಅಲ್ಲಿಯೂ ಕೆಲವು ಬುದ್ಧಿವಂತರು ಮೊಬೈಲು ಆರಿಸುವುದಿಲ್ಲ. ಇದುಸರಳ ಕಾನೂನಿನ ಪ್ರಶ್ನೆಮಾತ್ರವಲ್ಲ, ಎಲ್ಲರ ಜೀವದ ಪ್ರಶ್ನೆ ಎಂಬುದು ಕೆಲವರಿಗೆ ಅರ್ಥವಾಗುವುದಿಲ್ಲ.

ಈ ಮೊಬೈಲಿಗೆ ನಮ್ಮ ಜನ ದಾಸರಾಗಿರುವ ರೀತಿ ತಮಾಷೆಯದೂ ಕೆಲವೊಮ್ಮ ವಿಷಾದ ಹುಟ್ಟಿಸುವಂತೆಯೂ ಇದೆ. ಸಾರ್ವಜನಿಕ ಮೂತ್ರಾಲಯವೊಂದರಲ್ಲಿ ಒಮ್ಮೆ ಕೇಳಿದ್ದು. ಪೋನು ಸದ್ದುಮಾಡಿತು. ಆತ ಒಂದುಕೈಯಲ್ಲಿ ಫೋನೆತ್ತಿ ಹಲೋ ಎಂದ. ಆಕಡೆಯಿಂದ ಧ್ವನಿ ‘ಏನುಮಾಡುತ್ತಿದ್ದೀರಿ’ ಎಂದಿತು. ಈತ ‘ಉಚ್ಚೆಮಾಡುತ್ತಿದ್ದೇನೆ’ ಎಂದ! ತಮಾಷೆಯೆಂದರೆ ಜಗತ್ತಿನಲ್ಲಿ ಏನೇನೂ ಕೆಲಸವಿಲ್ಲದವರೂ ಒಂದು ನಿಮಿಷ ಶೌಚಕ್ಕೆ ಹೋಗುವಾಗ ಕೂಡ ಪೋನನ್ನು ಬಿಟ್ಟಿರಲಾರದಷ್ಟು ಬಿಜಿಯಾಗಿಬಿಟ್ಟಿದ್ದಾರೆ! ಹವ್ಯಾಸಗಳ ಬಗ್ಗೆ ಹೇಳುತ್ತೇವೆ- ಮೊದಲು ನಾವು ಕುಡಿಯುತ್ತೇವೆ, ಆನಂತರ ಕುಡಿತವೇ ನಮ್ಮನ್ನು ಕುಡಿಯುತ್ತದೆ. ಈ ಮೊಬೈಲು ದಾಸ್ಯವೂ ಕೆಲವರನ್ನು ಕುಡಿದುಬಿಡುತ್ತದೋ ಎಂಬ ಆತಂಕ ನನ್ನದು. ಇಂಟರ್ ನೆಟ್ ಈಗಾಗಲೇ ಕೆಲವರಿಗೆ ಅಂಟಿದ ವ್ಯಾಧಿಯಾಗಿದೆ. ದೊಡ್ಡ ಸೆಮಿನಾರಿಗೆ ಹೋದಾಗ ಒಮ್ಮೆ ಪ್ರೊಫೆಸರರೊಬ್ಬರು ರಾತ್ರಿ ನಾವು ಊಟಮಾಡಿ ಬರುವಾಗ ಇಂಟರ್ನೆಟ್ಟಿನಲ್ಲ ಮಗ್ನರಾಗಿದ್ದರು. ಬೆಳಿಗ್ಗೆ ನಾವು ತಿಂಡಿಗೆ ಬಂದಾಗಲೂ ಇಂಟರ್ನೆಟ್ನಲ್ಲಿದ್ದರು. ‘ನೀವು ನಿದ್ದೆ ಮಾಡಿಲ್ಲವಾ’ ಎಂದು ಕೇಳಿದೆ. ನಿಜ ಹೊರಬಿತ್ತು.”"ಹೌದು ಇಂಟರ್ ನೆಟ್ ಊಟ ತಿಂಡಿಗಳನ್ನೂ ಮರೆಸುವ ಜೀವದ ಸಂಗಾತಿಯಾಗಿದೆ. ನನಗೆ ಕುಟುಂಬವಿಲ್ಲ. ಹೆಂಡತಿ ಡೈವೋಸರ್ು ಕೊಟ್ಟಿದ್ದಾಳೆ ಈಗ ಇಂಟರ್ ನೆಟ್ ಮಾತ್ರ ನನ್ನ ಸಂಗಾತಿ” ಎನ್ನುತ್ತಾ ಕುಲ ಗೋತ್ರ ಯಾವುದೂ ಗೊತ್ತಿಲ್ಲದ ಯಾರಜೊತೆಯೋ ಪ್ರೊಫೆಸರ್ ಸಾಹೇಬರು ಚಾಟಿಂಗು ಮಾಡತೊಡಗಿದರು!

ಮೊಬೈಲು ಸೇವೆಗಿಳಿದಿರುವ ಕಂಪನಿಗಳ ನಡುವಿನ ಸ್ಪಧರ್ೆಯಿಂದಾಗಿ ದರ ಇಳಿಸಿಕೊಂಡಿರುವ ಮೊಬೈಲುಗಳು ನಮ್ಮ ಹೈಕಳು ರಾತ್ರಿ ಹಗಲೆನ್ನದೇ ಗುಸು ಗುಸು ಮಾತಾಡಿಕೊಂಡಿರಲು ಅವಕಾಶಮಾಡಿಕೊಟ್ಟಿವೆ. ಒಮ್ಮೆ ಮೈಸೂರಿನಿಂದ ಬೆಂಗಳೂರಿಗೆ ಬಸ್ಸಲ್ಲಿ ಹೋಗುವಾಗ ಹಿಂದಿನ ಸೀಟಿನ ಯುವತಿ ಮೂರೂವರೆ ಗಂಟೆಯುದ್ದಕ್ಕೂ ಪಿಸುಮಾತು ಆಡುವುದ ಕಂಡೆ. ಅದರ ಬಗ್ಗೆ ಹೊಟ್ಟೆ ಕಿಚ್ಚಲ್ಲ, ಅವರ ಮೊಬೈಲು, ಅವರ ದುಡ್ಡು ನಮ್ಮದೇನು ಗಂಟು ಹೋಗುವುದು ಎಂಬುದು ನಿಜ. ಕೇವಲ ಹದಿನೈದು ವರ್ಷಗಳಲ್ಲಿ ಮೊಬೈಲು ಅದೆಂಥ ಕ್ರಾಂತಿ ಉಂಟುಮಾಡಿತು! 25ರಿಂದ 35ಸಾವಿರ ರೂಪಾಯಿಗಳು ಮೊಬೈಲು ಸೆಟ್ಟಿಗಿತ್ತಲ್ಲ? ಹಾಗೆಯೇ ಒಂದು ನಿಮಿಷಕ್ಕೆ 35ರೂಪಾಯಿ ಮೊಬೈಲು ಕರೆಗಿತ್ತು! ಅಭಿವೃಧ್ಧಿ ಶೀಲ ದೇಶವನ್ನು ಕಲ್ಪನೆ ಮಾಡಿಕೊಳ್ಳುವಾಗ, ಕೆಲವರ್ಷಗಳ ಹಿಂದೆ ಒಮ್ಮ ಬೆಳಗಿನ ಜಾವ ಮಂಗಳೂರಲ್ಲಿ ನೋಡಿದ ದೃಶ್ಯ ನನ್ನ ಕಣ್ಣೆದುರು ಬರುತ್ತದೆ. ಅಂದು ಬೀದಿ ಗುಡಿಸುತ್ತಿದ್ದ ಜಾಡಮಾಲಿ ಹೆಣ್ಣು ಮಗಳು ಒಂದು ಕೈಯಲ್ಲಿ ಮೊಬೈಲು ಹಿಡಿದು ಗುಡಿಸುತ್ತಿದ್ದಳು. ನಾನು ಬಸ್ಸಲ್ಲಿ ಪ್ರಯಾಣಿಸುತ್ತಿದ್ದೆ ಹೀಗಾಗಿ ಫೋಟೋ ತೆಗೆಯುವಂತಿರಲಿಲ್ಲ. ತೆಗೆದಿದ್ದರೆ ಅದು ಖಂಡಿತವಾಗಿ ನಮ್ಮ ಅಭಿವೃಧ್ಧಿಶೀಲತೆಗೆ ಬರೆದ ಬಾಷ್ಯವಾಗುತ್ತಿತ್ತು. ಒಳ್ಳೆಯ ಪ್ರತೀಕವಾಗುತ್ತಿತ್ತು! ಮೊಬೈಲು ಜನಪ್ರಿಯಗೊಂಡ ಕಾಲದಲ್ಲಿ ಬದುಕಿರುವುದು ನಮ್ಮ ಪುಣ್ಯ. ಇನ್ನು ಮುಂದಕ್ಕೆ ಮೊಬೈಲು ಕ್ಷೇತ್ರದಲ್ಲಿ ಎಷ್ಟೆಲ್ಲ ಬದಲಾವಣೆಗಳಾಗಬಹುದು ಆಗ ಮಾತ್ರ ‘ಛೇ – ನಾವು ಇನ್ನೂ ತಡೆದು ಹುಟ್ಟಬೇಕಿತ್ತು ಅನಿಸಬಹುದು! ‘ಸ್ಥಾವರಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನ ನುಡಿಯನ್ನು ನಮ್ಮೆದುರೆ ಸಾಬೀತುಮಾಡಿದ ಕೀತರ್ಿ ಈ ಮೊಬೈಲಿಗೆ ಸೇರಬೇಕು!

Posted in choukattigolapattu | Leave a comment

ಮಕ್ಕಳನ್ನು ಶಾಲೆಗೆ ಕಳುಹಿಸುವುದು!

ನಮ್ಮ ಶಾಲಾ ದಿನಗಳಲ್ಲಿ ಒಂದು ಪಾಠವಿತ್ತು. ಎಷ್ಟನೇ ತರಗತಿಯದೆಂದು ನೆನಪಿಲ್ಲ. ‘ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದ್ದು’ ಎಂಬುದು ಪಾಠದ ಹೆಸರು. ವರ್ಷಕ್ಕೆ ಆರು ತಿಂಗಳು ನಿದ್ದೆಮಾಡುವ ಈ ಪ್ರಳಯಾಂತಕನನ್ನು ಎಬ್ಬಿಸಲು ಬಡಪಾಯಿ ರಾಕ್ಷಸ ಪೇದೆಗಳು ಅದೆಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸಿದ ಪಾಠವದು. ಕುಂಭಕರ್ಣ ಉಸಿರನ್ನು ಎಳೆದುಕೊಂಡ ಹೊಡೆತಕ್ಕೆ ಏಳಿಸಲು ಬಂದ  ಅಸುರರು ಅವನ ಮೂಗಿನ ಹೊಳ್ಳೆಗಳೆಂಬ ಲೋಕದೊಳಗೆ ಹೋಗಿ  ಬೀಳುತ್ತಿದ್ದರು. ಅವನ ಉಸಿರು ಹೊರಬಿದ್ದಾಗ ಚಂಡಮಾರುತವೊಂದು ಎತ್ತಿ ಬಿಸಾಡಿದ ಹಾಗೆ ಹೊರಬಂದು ಬೀಳುತ್ತದ್ದರು! ಅದ್ಭುತ ಕಥನ ಕೌಶಲದ ಪಾಠವದು.

ದಿನಾ ಬೆಳಿಗ್ಗೆ ಚಿಕ್ಕ ಮಗಳು ಸಿರಿಯನ್ನು ಎಬ್ಬಿಸುವಾಗ  ನನಗೆ ಈ ಪಾಠ ನೆನಪಾಗುವುದೇತಕೋ! ಅದಕ್ಕೆ ಕಾರಣವಿಲ್ಲದಿಲ್ಲ. ಎದ್ದರೆ ಮಲಗದ, ಮಲಗಿದರೆ ಏಳದ ಈ ಮಹರಾಯ್ತಿಯನ್ನು ದಿನಾ ಬೆಳಿಗ್ಗೆ ಐದೂವರೆಗೆ ಏಳಿಸುವ ಕೆಲಸ ನನ್ನದು. ನಿಜವೆಂದರೆ ಈ  ಕೆಲಸ- ಸುಖವಾಗಿ ಮುಂಜಾನೆಯ ಸಿಹಿ ನಿದ್ದೆಯಲ್ಲಿ ಮಲಗಿರುವ ಮಕ್ಕಳನ್ನು ಏಳಿಸಿ ಶಾಲೆಗೆ ಕಳುಹಿಸುವ ಕೆಲಸ- ನನ್ನ ವೈರಿಗಳಿಗೂ ಸಿಗಬಾರದೆಂಬುದೇ ನನ್ನ ಆಶಯ. ಇಲ್ಲಿ ಸಲಾಲದಲ್ಲಿ ಬೇಗ ಶಾಲೆ. ಬೆಳಿಗ್ಗೆ 7-20ಕ್ಕೆ ಶಾಲೆ ಶುರು. ಅಂದರೆ ಮಕ್ಕಳು ಐದೂವರೆಗೆ ಏಳಬೇಕು. ಆರೂವರೆಗೆ ಕಾರು ಹತ್ತ ಬೇಕು. 7-15ಕ್ಕೆ ಶಾಲೆ ಸೇರಬೇಕು. ಮೊನ್ನೆ ಮೊನ್ನೆ ಸಲಾಲಕ್ಕೆ ಬಂದ ಸ್ನೇಹಿತರ ಮಗ ರಂಪಹಿಡಿದಿದ್ದಾನೆ-’ನನಗೆ ಈ ಸ್ಕೂಲು ಬೇಡ, 9-30ಕ್ಕೆ ಆರಂಭವಾಗುವ ಸ್ಕೂಲು ಹುಡುಕು ಎಂಬುದಾಗಿ ಅಪ್ಪನಿಗೆ ದುಂಬಲು ಬಿದ್ದಿದ್ದಾನೆ. ಆದರೆ ತಮಾಷೆಯೆಂದರೆ- ಶಾಲೆ ತಡವಾಗುವುದಿದ್ದರೂ ಮಲಗಿದ ಮಕ್ಕಳನ್ನು ಏಳಿಸಿ ತಯಾರು ಮಾಡಿ ಕಳಿಸುವಾಗಿನ ಗಡಬಿಡಿ ಇದ್ದದ್ದೇ. ಅಮ್ಮಂದಿರಿಗೆ ಎದೆ ಹೊಡೆದುಕೊಳ್ಳುವ ಅನುಭವ ಸಾರ್ವತ್ರಿಕ. ಮೈಸೂರಲ್ಲಿ  ಮಕ್ಕಳ ಶಾಲೆ ಒಂಭತ್ತೂವರೆಗೆ ಆರಂಭವಾಗುತ್ತಿತ್ತು. ಆಗಲೂ ಒಂಭತ್ತೂ ಇಪ್ಪತ್ತಕ್ಕೆ ಮನೆಬಿಡುವಾಗಿನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ನಗು ಬರುತ್ತದೆ ಅಥವಾ ಮನೆಗೆ ಬೆಂಕಿಬಿದ್ದಂತೆ ಓಡುವ ಅವಸರ ನೆನಪಾಗುತ್ತದೆ!

ಎಲ್ಲರ ಮನೆಯೂ ದೋಸೆಯೂ ತೂತು ಎನ್ನುವ ಹಾಗೆ ಮಕ್ಕಳಿರುವ ಮನೆಗಳಲ್ಲೆಲ್ಲ ಈ ಸಮಸ್ಯೆ ಇದ್ದದ್ದೇ! ಅದು ಬೆಳಿಗ್ಗೆ ಮಕ್ಕಳನ್ನು ಏಳಿಸಿ ಶಾಲೆಗೆ ತರಾತುರಿ. ಈಗಿನ ಕಾಲದಲ್ಲಿ ರಾತ್ರಿ ಎಷ್ಟು ಹೊತ್ತಿಗೆ ಮಕ್ಕಳು ಮಲಗುತ್ತಾರೋ ಲೆಕ್ಕವಿಲ್ಲ.ಕೆಲವರು ಬಹಳ ಶಿಸ್ತಿನ ಪಾಲಕರು ಮಕ್ಕಳನ್ನು 9-30ಕ್ಕೆ ಮಲಗಿಸಿಬಿಡುವುದಾಗಿ ಹೇಳುತ್ತಾರೆ. ನನಗೆ ಮಾತ್ರ ಮಕ್ಕಳ ಮೇಲೆ ಆ ಒತ್ತಡ ಹಾಕುವುದು ಸಾಧ್ಯವಾಗಿಲ್ಲ. ರಾತ್ರಿ ನಾನು ಮಲಗಿದರೂ ಅವರು ಏನಾದರೂ ಮಾಡಿಕೊಂಡಿರುತ್ತಾರೆ.  ಹೀಗಾಗಿ ಬೆಳಿಗ್ಗೆ ಏಳುವುದು ಬಲುಕಷ್ಟ. ‘ರನ್ನ, ಚಿನ್ನ, ಬಂಗಾರು, ಏಳು’ ಎಂದರೆ ಯಾರೂ ಏಳುವುದಿಲ್ಲ. ವೈಶಂಪಾಯನ ಸರೋವರದಲ್ಲಿಅಡಗಿದ್ದ ಸುಯೋಧನನನ್ನು ಹೊರಗೆ ಕರೆಯಲು ಭೀಮನನ್ನು ಬಿಟ್ಟು ಉಳಿದವರ ಕರೆ ಸಾಕಾಗಲಿಲ್ಲ- ಮೃದುವಾಗಿ ಹೋಯ್ತು. ಕಿಚ್ಚು ಹತ್ತಿ ಧುಯರ್ೋಧನ ಕೊಳದಿಂದ ಎದ್ದು ಬರುವಂತೆ ಮಾಡಲು ಅವು ವಿಫಲವಾದವು.ಭೀಮನ ಕರೆಗೆ ಮಾತ್ರ ಧುಯರ್ೋಧನ ಗದೆ ಹಿಡಿದು ಎದ್ದು ಬರುತ್ತಾನೆ. ಮಕ್ಕಳನ್ನು ಏಳಿಸುವಾಗ ನನಗೆ ಅದುವೇ ನೆನಪಾಗುತ್ತದೆ. ” ಏಳು ಪುಟ್ಟಾ, ರಾಜಾ” ಎಂಬ ಅಮ್ಮನ ಪ್ರೀತಿಯ ಕರೆಗಳೆಲ್ಲ ಇಲ್ಲಿ  ವಿಫಲವಾಗುತ್ತವೆ. ನಂತರ ಕರೆಯುವ ಸರದಿ ಅಪ್ಪನದು. ಸ್ವಲ್ಪ ಗಡುಸಾಗಿ- ಹೆದರಿಸುವಂತಿದ್ದರೂ ಮಲಗಿದವರನ್ನು ಏಳಿಸಲು ಯಶಸ್ವಿಯಾಗುವುದಿಲ್ಲ. ಗೋರ್ಕಲ್ಲ ಮೇಲೆ ಮಳೆಸುರಿದ ಹಾಗೆ ಆಗುತ್ತದೆ. ಕರೆದು ಏಳಿಸುವ ಪ್ರಯತ್ನಗಳೆಲ್ಲ ವಿಫಲವಾದಾಗ ಇನ್ನೇನು ಮಾಡುವುದು?ಏಟು ಕೊಡಬೇಕೆ? ಮನಸ್ಸು ಅಷ್ಟು ಕಠಿಣವಾಗಲು ಸಾಧ್ಯವಿಲ್ಲ. ಯಾಕೆಂದರೆ ಇದು ಬೇಕಂತಲೇ ಮಾಡುವ ತಪ್ಪಲ್ಲ.

ಬರಿದೆ ಕರೆದರೆ ಹಾಸಿಗೆಯಿಂದ ಏಳದ ಮಕ್ಕಳಿಗೆ ಕೆಲವು ಮನೆಗಳಲ್ಲಿ ಮಾಡುವ ಉಪಾಯವೊಂದಿದೆ. ಅನಾಮತ್ತಾಗಿ ಮಕ್ಕಳನ್ನು ಎತ್ತಿಕೊಂಡು ಹೋಗಿ ಬಚ್ಚಲು ಮನೆಯಲ್ಲಿ ಪ್ರತಿಷ್ಠಾಪಿಸುವುದು ಮತ್ತು ದಬದಬ ನೀರು ಸುರಿಯುವುದು. ಆಗ ಸಾಮಾನ್ಯವಾಗಿ ಮಕ್ಕಳು ಕಣ್ಣು ಬಿಡುತ್ತಾರೆ. ನನ್ನ ಗ್ರಹಚಾರವಿರಬೇಕು- ಈ ಪ್ರಯತ್ನವೂ ಯಶಸ್ವಿಯಾಗಲಿಲ್ಲ. ಸೀದಾ ಬಚ್ಚಲಿಗೆ ಒಯ್ದು ಕೂರಿಸಿದರೆ ಅಲ್ಲಿಯೂ ಮಲಗಿಬಿಡುವುದೇ? ಇನ್ನು ಬೆಳಗಿನ ಕೆಲಸ ಮಾಡಲು ಕುಳಿತು ಬಿಟ್ಟರೆ ಆಯ್ತು- ನಿದ್ದೆಮಾಡಲು ಇನ್ನಷ್ಟು ಸಮಯ ಅನಾಯಾಸವಾಗಿ ಸಿಕ್ಕಂತೆ! ಅಮ್ಮ ತಿಂಡಿ ಮಾಡುವ ಗಡಿಬಿಡಿಯಲ್ಲಿರುವುದರಿಂದ ಮಗಳಿಗೆ ಸ್ನಾನಮಾಡಿಸುವ ಕೆಲಸ ಅಪ್ಪನದು. ನಿದ್ದೆಗಣ್ಣಲ್ಲಿ ಇರುವ ಮಗಳು ಕೊಸಕಕೊಸ ಮಾಡುತ್ತಾಳೆ. ನೀರು ಬಿಸಿಯೆಂದೋ ತಣ್ಣಗಿದೆಯೆಂದೋ ಕೊಸರಾಡುತ್ತಾಳೆ. ಕೊನೆಗೆ ‘ಅಪ್ಪ ಸ್ನಾನಮಾಡಿಸುವುದು ಬೇಡ, ಅಮ್ಮನೇ ಬರಲಿ’ ಎಂದು ಹಟಹಿಡಿಯುತ್ತಾಳೆ. ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದೇ ಸ್ನಾನದ ಶಾಸ್ತ್ರ ಮಾಡಿಸಿ ದೇವರಿಗೆ ನಮಸ್ಕಾರ ಮಾಡೆಂದು  ಬಿಟ್ಟರೆ- ನಮಸ್ಕರಿಸುವ ನೆಪದಲ್ಲಿ ಉದ್ದಂಡ ಬೀಳುವ ದೇಹ ಮೇಲೇಳುವುದೇ ಇಲ್ಲ!ನಾವೇನೋ ಭಾರೀ ಭಕ್ತಿಯಿಂದ ನಮಸ್ಕರಿಸುವಳೇನೋ ಎಂದುಕೊಂಡರೆ ತಪ್ಪು- ಅಲ್ಲಿ ಮತ್ತೆ ನಿದ್ದೆ. ಅಷ್ಟಾಗುವಾಗ ಇನ್ನು ಕಾರು ಬರಲು ಹತ್ತು ನಿಮಿಷ ಬಾಕಿಇರುತ್ತದೆ. ತಿಂಡಿಗೆ ಕೂರಿಸಿದರೆ ಒಂದು ತುತ್ತು ಬಾಯಿಗೆ ಹೋಗುವುದು ಇನ್ನೊಂದು ತುತ್ತು (ಅವಳಿಗೇ ಬಿಟ್ಟರೆ) ಮೂಗಿಗೋ ಕೆನ್ನೆಗೋ ಹೋಗಿ ಬಡಿದು ಬಟ್ಟೆಯ ಮೇಲೆಲ್ಲ ಚೆಲ್ಲಿ ಮತ್ತೆ ಸ್ನಾನ ಮಾಡಿಸಬೇಕಾದ ಪರಿಸ್ಥಿತಿ  ಬರುವುದು ಗ್ಯಾರಂಟಿ.

ಶಾಲೆಗೆ ಹೋಗುವ ಮಕ್ಕಳು ತಿಂಡಿ ತಿಂದು ಹೋಗುವಂತೆ  ಮಾಡುವುದು ಹೇಗೆ ಎನ್ನುವುದು ಸಲಾಲದಲ್ಲಿ ಎಲ್ಲ ಪಾಲಕರನ್ನು ಕಾಡುವ ಸಮಸ್ಯೆಯಿರುವಂತಿದೆ. ಮಕ್ಕಳು ಬೇಗ ಹೋಗುವ ಅವಸರದಲ್ಲಿ  ಚೆನ್ನಾಗಿ  ತಿಂಡಿ ತಿಂದುಕೊಂಡು ಹೋಗುತ್ತಾರೆಂದು ಹೇಳುವ ಪಾಲಕರನ್ನು ನಾನು ನೋಡಿಲ್ಲ. ‘ಮಗು ಬೆಳಿಗ್ಗೆ ಏನೂ ತಿನ್ನಲ್ಲ ಎಂಬುದು ತಾಯಂದಿರ ಸಾರ್ವತ್ರಿಕ ಅಳಲು. ಡಾಕ್ಟರು ಸಿಕ್ಕಾಗ ಇದಕ್ಕೆ ಪರಿಹಾರ ಕೇಳುವುದು ಮಾಮೂಲು. ಆದರೆ ನಾವು ಹಾಗೆ ಕೇಳುವ ಮೊದಲೇ  ನಮ್ಮ ವೈದ್ಯರು ತಮ್ಮ ಮಗಳು  ಚಿಕ್ಕಂದಿನಿಂದ ಬೆಳಗಿನ ಉಪಾಹಾರವನ್ನು ತ್ಯಜಿಸಿದ್ದಾಳೆಂದು ತಿಳಿಸಿದರು. ಇದು ಬೊಕ್ಕತಲೆಯ ಡಾಕ್ಟರರ ಬಳಿ ಕೂದಲು ಉದುರುವುದನ್ನು ತಪ್ಪಿಸುವುದು ಹೇಗೆಂದು ಕೇಳಲು ಹೋದಂತಾಯಿತು. ಅಂತೂ ಮಕ್ಕಳು ತಿಂಡಿ ತಿಂದು ಶಾಲೆಗೆ ಹೋಗುವಂತೆ ಮಾಡುವುದು ಹೇಗೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತದೆ. ಸಾಮ- ದಾನಕ್ಕೆ ಮಕ್ಕಳು ಬಗ್ಗದಿದ್ದಾಗ ಕೆಲವು ಮನೆಗಳಲ್ಲಿ ದಂಡ ಪ್ರಯೋಗವಾಗುವುದಿದೆ. ಆಗ ಬೆಳಗಿನ ಜಾವ ಮನೆಯಲ್ಲಿಭಾರೀ ಕದನ ವೇರ್ಪಡುತ್ತದೆ. ಕೊನೆಗೂ ಸೋಲುವವರು ಪಾಲಕರೇ! ಯಾಕೆಂದರೆ ತಿಂಡಿ ತಿನ್ನದಿದ್ದರೆ ಹೋಗಲಿ, ಅಳು ನಿಲ್ಲಿಸಿದರೆ ಸಾಕೆಂಬ ಪರಿಸ್ಥಿತಿ ನಿಮರ್ಾಣವಾಗುತ್ತದೆ! ಅಲ್ಲಿಗೆ ಮಕ್ಕಳ ಉದ್ದೇಶ ಫಲಿಸುತ್ತದೆ. ಅತ್ತು ಪಾಲಕರನ್ನು ಹೆದರಿಸುವ ಮಕ್ಕಳು ತಟ್ಟೆಯನ್ನು ಬಿಟ್ಟು ರೊಯ್ಯನೆ ಓಡುತ್ತಾರೆ. ಎಷ್ಟೋಸಾರಿ,ಹೇಗಾದರೂ ಮಾಡಿ ಮಕ್ಕಳು ತಿಂದುಕೊಂಡು ಶಾಲೆಗೆ ಹೋಗುವಂತೆ ಮಾಡಬೇಕೆಂದು ಹಟಕ್ಕೆ ಬೀಳುವ ತಾಯಂದಿರು ಮಕ್ಕಳಿಗೆ  ಬೇಕಾದ ತಿಂಡಿಯನ್ನೇ ಮಾಡುತ್ತಾರೆ. ( ಅಪ್ಪನಿಗಲ್ಲ?) ಮಕ್ಕಳಿಗೆ ಪುಲಾವು ಇಷ್ಟವೆಂದು ಪುಲಾವು ಮಾಡಿದರೆ ಒಂದು ದಿನ ಖುಷಿಯಿಂದ ತಿನ್ನುತ್ತಾರೆ. ಮರುದಿನ ಮತ್ತೆ ಪುಲಾವು ಮಾಡಿದರೆ ಅಮ್ಮನೇ ತಿನ್ನಬೇಕಾಗುತ್ತದೆ! ಮನೆಯಲ್ಲಿ ಇಡ್ಲಿ ಮಾಡಿದರೆ ಸುತರಾಂ ತಿನ್ನಲೊಪ್ಪದ ಮಕ್ಕಳು, ನೀವು ಬೇರೆಯವರ ಮನೆಗೆ ಹೋಗಿ “ನಮ್ಮ ಮಗಳು ಇಡ್ಲಿ ತಿನ್ನುವುದಿಲ್ಲ” ಎಂಬ ಹೇಳಿಕೆ ನೀಡಿದರೆ- ಮನೆಯಲ್ಲಿ ಇಡ್ಲಿಯನ್ನು ಮೂಸಿ ನೋಡದವಳು ಅವರ ಮನೆಯಲ್ಲಿ ಚಪ್ಪರಿಸಿಕೊಂಡು ತಿನ್ನುತ್ತಾಳೆ! ಬೆಳಗಿನ ತಿಂಡಿಯದೂ ಇದೇ ತಾಪತ್ರಯ. ಅದರಲ್ಲೂ ಹೆಣ್ಣುಮಕ್ಕಳು ಊಟ- ತಿಂಡಿಯಲ್ಲಿ ಗಂಡು ಮಕ್ಕಳಿಗಿಂತ ಹಿಂದೆ ಎಂಬುದಾಗಿ ಕೇಳಿದ್ದೇನೆ ಇಂಥ ಸಾರ್ವತ್ರೀಕರಣ ಸರಿಯೋ ಗೊತ್ತಿಲ್ಲ. “ಗಂಡುಮಕ್ಕಳಿಗೆ ಸಾಕು- ಸಾಕು ಎನ್ನಬೇಕು, ಹೆಣ್ಣುಮಕ್ಕಳಿಗೆ ತಿನ್ನು-ತಿನ್ನು ಎನ್ನಬೇಕು” ಎಂಬುದು ಬಲ್ಲವರ ಅಭಿಪ್ರಾಯ.ಮನೆಯಲ್ಲಿ ಏನು ಮಾಡುತ್ತಾರೋ ಅದನ್ನು ಬಿಟ್ಟು ಬೇರೆಲ್ಲಾ ಮಕ್ಕಳಿಗೆ ರುಚಿಸುತ್ತದೆಯೆಂಬುದು ಅಮ್ಮಂದಿರ ಆರೋಪ. ಅಂತೂ ಶಾಲೆಗೆ ಹೋಗುವ ಮಕ್ಕಳಿಗೆ ಹೊಟ್ಟೆ ತುಂಬುವಂತೆ ತಿನ್ನಿಸಿ ಕಳಿಸುವುದೊಂದು ದೊಡ್ಡ ಸವಾಲು.

ತಿಂಡಿಯ ಶಾಸ್ತ್ರ ಮುಗಿದರೂ ಶಾಲೆಗೆ ಕಳುಹಿಸಲು ಅಮ್ಮನ ತಾಪತ್ರಯ ಮುಗಿಯುವುದಿಲ್ಲ. ಅವರ ತಲೆ ಬಾಚಬೇಕು, ಹಣೆಗೆ ಇಡಬೇಕು, ಮುಖಕ್ಕೆ ಪೌಡರು ಹಚ್ಚಬೇಕು, ಎಲ್ಲೋ ಬಿದ್ದಿರುವ ಟೈ ಹುಡುಕಿ ಕಟ್ಟಬೇಕು. ಒಬ್ಬಳಿಗೆ ಕೂದಲು ಬಾಚಿದ್ದು ಸರಿಯಾಗಲಿಲ್ಲ ಎಂಬ ಕೊರಗಾದರೆ ಇನ್ನೊಬ್ಬಳಿಗೆ ಜುಟ್ಟಿ ಯ ಮೇಲೆ ಸಿಟು. ್ಟಅಂತೂ ಅಮ್ಮ ಮಾಡಿದ್ದು ಸರಿಯಾಗುವಂತಾದರೆ ಅಂದು ಅಮ್ಮನ ಪುಣ್ಯ. ಮಕ್ಕಳನ್ನು ಶಾಲೆಗೆ ಕಳಿಸುವ ಕೊನೆಯ ಘಟ್ಟವೆಂದರೆ ಮಣ ಭಾರದ ಚೀಲವನ್ನು ದೊಡ್ಡವಳ ಹೆಗಲಿಗೇರಿಸಿ ಚಿಕ್ಕವಳದನ್ನು ನಾವೇ ಹೊತ್ತುಕೊಂಡು ನಾಲ್ಕನೇ ಮಹಡಿಯ ಮನೆಯಿಂದ ಕೆಳಗಿಳಿದು ಬರುವುದು. ಆ ಹೊತ್ತಿಗೆ ಕಾರು ಬಂದರೆ ಆಯ್ತು. ಒಂದು ನಿಮಿಷ ತಡವಾದರೂ ಪಿರಿಪಿರಿತಪ್ಪಿದ್ದಲ್ಲ. ಅಂತೂ ಕಾರು ಬಂದು ಮಕ್ಕಳ ಕೂರಿಸಿ ಟಾಟಾ ಮಾಡಿ ಬರುವ ಅಮ್ಮನಿಗೆ ಪ್ರತಿದಿನ ಒಂದು ಹೆರಿಗೆಯಾದಂತೆ! ಮಕ್ಕಳನ್ನು ಶಾಲೆಗೆ ಕಳಿಸುವ ಹೊತ್ತಿಗೆ ಅಮ್ಮನ ಬಿ.ಪಿ ತಪಾಸಣೆ ಮಾಡಿದರೆ ಎಲ್ಲ ಅಮ್ಮಂದಿರಿಗೂ ಬಿ.ಪಿ ತಪ್ಪಿದ್ದಲ್ಲ. ಆದರೆ ಈಗ ಕಷ್ಟವಾಗಿ ಕಾಣುವ ಈ ಕೆಲಸ ಮುಂದೆ ಎಷ್ಟೋ ವರ್ಷದ ಬಳಿಕ ಒಳ್ಳೆಯ ನೆನಪು ನೀಡಬಹುದು.ಅನುಭವವವು ಸವಿಯಲ್ಲ, ಅದರ ನೆನಪೇ ಸವಿಯು ಎಂಬುದು ಅದ್ಕಕೇ ಅಲ್ಲವೇ?

Posted in manassu haridante | Leave a comment

ತುರಸಣಿಗೆ ಬಳ್ಳಿ

ಇಂದು ಅದೇಕೊ

ಬಿಟ್ಟೂಬಿಡದೆ ಕಾಡಿದ್ದು

ತುರಸಣಿಗೆ ಬಳ್ಳಿ!

 

ನಿಗೂಢ ಕಾಡಲ್ಲಿ ಅಂಡಲೆವ ಹೈಕಳಿಗೆ

ಅಚಾನಕ್ ಒಮ್ಮೊಮ್ಮೆ ಮೈಮುಟ್ಟಿಬಿಡುವ ಕಳ್ಳಿ !!

ಶುರುವಾಗುತ್ತೆ ನೋಡಿ

ಅಸಾಧ್ಯ ತುರಿಕೆ

ತುರಿಸಿದಷ್ಟೂ ಉರಿ-ಉರಿಗೆ ಸೊಪ್ಪುಹಾಕದೆ

ತುರಿಸುವ  ಖುಷಿ

ಒಂದೊಂದು ಅಂಕಗಳಿಗಾಗಿ

ಬೆಂಬಿಡದ ಬೇತಾಳಗಳಾಗಿ

ಕಾಡುವ ಹುಡುಗರಿಗೆ ಹೀಗೊಮ್ಮೆ

ಮುಟ್ಟಿಸಿಬಿಡಬೇಕು

ತುರಸಣಿಗೆ ಬಳ್ಳಿ

ಕೂತಿರಲಿ ಕೆರಕೋತ ಕೆರಕೋತ

ನಿಲ್ಲುವ ವರೆಗೆ ವರಾತ.

ಬೇಕು ಇವರಿಗೆ ಐವತ್ತಕ್ಕೆ ಐವತ್ತು

ಕೊಟ್ಟವರಿಗಿಲ್ಲ ಕಿಮ್ಮತ್ತು

ಕಷ್ಟಪಟ್ಟು ಪಾಠಮಾಡಿದ್ದೆಲ್ಲ ವೇಸ್ಟು

ನೂರಕ್ಕೆ ನೂರು ಕೊಡುವವನು  ಮಾತ್ರ

ಕೊನೆಗೆ ಒಳ್ಳೆಯ ಮೇಸ್ಟ್ರು

ಇಂಥವರಿಗೆ ಒಮ್ಮೆಮುಟ್ಟಿಸಬೇಕು

ತುರಸಣಿಗೆ ಬಳ್ಳಿ

ತುರಿಸುತ್ತಿರಲಿ

ನಿಲ್ಲುವವರೆಗೆ

ಖಾಲಿ ಅಂಕ ಗಿಟ್ಟಿಸುವ ಖಯಾಲಿ

 

Posted in gadyavagaddu | 1 Comment